ಮುಂಬಯಿ
	ಮಹಾರಾಷ್ಟ್ರ ರಾಜ್ಯದ ರಾಜಧಾನಿ. ಹಿಂದೆ ಬೊಂಬಾಯಿ ಪ್ರಾಂತ್ಯದ ಅನಂತರ ಬೊಂಬಾಯಿ ರಾಜ್ಯದ ರಾಜಧಾನಿಯಾಗಿತ್ತು. ಪಶ್ಚಿಮ ಭಾರತದ ಪ್ರಮುಖ ಬಂದರು. ನಗರದ ಹಳೆಯ ಭಾಗ ಇರುವುದು ಒಂದು ದ್ವೀಪದ ಮೇಲೆ ಅದು ತಗ್ಗಾದ ಮೈದಾನ. ಇದರಲ್ಲಿ ಕಾಲುಭಾಗ ಸಮುದ್ರ ಮಟ್ಟಕ್ಕಿಂತ ಕೆಳಗೆ ಇದೆ. ಈ ಮೈದಾನದ ಆಚೀಚೆ ಸಮಾಂತರದಲ್ಲಿ ಹಬ್ಬಿರುವ ಎರಡು ತಗ್ಗುಬೆಟ್ಟಗಳಿವೆ. ಇವು ದ್ವೀಪದ ತುದಿಯಿಂದಾಚೆಗೆ ಒಂದನ್ನೊಂದು ಕೂಡುತ್ತವೆ. ಅಲ್ಲಿ ಕಡಿದಾದ ಬಂಡೆಯ ಮೇಲೆ ದೀಪಸ್ತಂಭವೊಂದನ್ನು ನಿರ್ಮಿಸಲಾಗಿದೆ. ಈ ಬೆಟ್ಟಗಳ ಪಶ್ಚಿಮದ ಸಾಲು ಎದ್ದು ಕಾಣುವಂತಿದೆ. ಮಲಬಾರ್ ಹಿಲ್ ಸಮುದ್ರಮಟ್ಟದಿಂದ 54.86 ಮೀಟರ್ ಎತ್ತರವಾಗಿದೆ. ಪೂರ್ವದ ಸಾಲು ಏರುತಗ್ಗುಗಳಿಂದ ಕೂಡಿದ್ದು ಇಲ್ಲಿ ಮಜಗಾಂವ್, ಸೆವ್ರಿ, ಪರೆಲ್ ಮುಂತಾದ ಬೆಟ್ಟಗಳಿವೆ. ಸುಮಾರು 18 ಕಿಮೀ ಉದ್ದ, 5-6ಕಿಮೀ ಅಗಲ ಇರುವ ಈ ದೀಪದ ವಿಸ್ತೀರ್ಣ ಸುಮಾರು 39 ಚಕಿಮೀ. ಇದರ ದಕ್ಷಿಣದಲ್ಲಿ ಸಳ್ಳಿಯ ಕಾಲುಗಳಂತೆ ಎರಡು ಮುಂಚಾಚುಗಳಿವೆ. ಇದರ ನಡುವಣ ಭಾಗ ಬ್ಯಾಕ್ ಬೇ. ಈ ದ್ವೀಪಕ್ಕೂ ಉತ್ತರದ ದೊಡ್ಡ ದ್ವೀಪಕ್ಕೂ ಮುಖ್ಯ ಭೂಭಾಗಕ್ಕೂ ಸಂಪರ್ಕ ಹೆಚ್ಚಿದಂತೆ ಮುಂಬಾಯಿ ಮಹಾನಗರವಾಗಿ ಬೆಳೆಯಿತು. ಮುಂಬಾಯಿ ನೈಸರ್ಗಿಕರೇವು ಹೊಂದಿರುವ ನಗರ. ಸಣ್ಣ ಗುಡ್ಡಗಳ ನಡುವಣ ಕಿರಿದಾದ ಕಡಲಚಾಚು ನೈಸರ್ಗಿಕ ಸೌಂದರ್ಯದಿಂದ ಕೂಡಿದೆ. ಮುಂಬಾಯಿ ಮಹಾನಗರದ ವಿಸ್ತೀರ್ಣ 603 ಚಕಿಮೀ. ಜನಸಂಖ್ಯೆ 82,43,405 (1981).

	ಇಂದು ಮುಂಬಯಿ ಆಡಳಿತ ಕೇಂದ್ರವಾಗಿರುವ ಮುಂಬಯಿನಗರ ಜಿಲ್ಲೆಯೆಂದು ಪರಿಗಣಿಸಿದೆ. ವಿಸ್ತೀರ್ಣ 157ಚ.ಕಿ.ಮೀ. ಇದ್ದು ಜನಸಂಖ್ಯೆ 3326837 (2001) ಇದೆ. ಮುಂಬಯಿ ಹೊರವಲಯದ ಆಡಳಿತ ಕೇಂದ್ರ ಬಾಂದ್ರ. ಇದರ ವಿಸ್ತೀರ್ಣ 446ಚ.ಕಿ.ಮೀ. ಜನಸಂಖ್ಯೆ 85,87,561 (2001).

	ಇತಿಹಾಸ: ಭಾರತದ ಮಹಾದ್ವಾರ ಎಂಬ ಹೆಸರು ಪಡೆದಿರುವ ಮುಂಬಯಿ ಪ್ರದೇಶದಲ್ಲಿ ಕ್ರಿಸ್ತಪೂರ್ವದ ಹಿಂದಿನಿಂದಲೂ ಕೋಳಿ ಎಂಬ ಜನರು ನೆಲಸಿದ್ದರೆಂದೂ ಅವರ ಕುಲದೇವತೆಯಾದ ಮುಂಬಾದೇವಿಯಿಂದಾಗಿ ಇದಕ್ಕೆ ಮುಂಬಾಪುರಿ, ಮುಂಬೂಲ ಎಂಬ ಹೆಸರು ಬಂತೆಂದೂ ಹೇಳಲಾಗಿದೆ. ಮುಂಬಾಯಿ ಮೂಲತಃ ಏಳು ನಡುಗಡ್ಡಗಳ ಸಮೂಹದಾಗಿದ್ದು ಆ ನಡುಗಡ್ಡೆಗಳು ಭೂಭಾಗದ ಮುಂದೆ ಕಡಲಂಚಿನಲ್ಲಿ ಹರಡಿಕೊಂಡಿದ್ದುದರಿಂದ ಅದನ್ನು ಮೊದಲು ಮುಂಬೆಟ್ಟ (ಕನ್ನಡ) ಎಂದು ಕರೆಯಲಾಗುತ್ತಿತೆಂದೂ ಮುಂದೆ ಅದೇ ಮುಂಬೆ, ಮುಂಬಾಯಿ ಎಂದಾಯಿತೆಂದೂ ಪ್ರತೀತಿಯಿದೆ. ಮುಂಬಾಯಿ ಉಪನಗರವೆನಿಸುವ ಕಾಲದಿಂದಲೂ ದೊರೆತ ಕಲ್ಲಿನ ಉಪಕರಣಗಳಿಂದ ಈ ನಗರದಲ್ಲಿ ಶಿಲಾಯುಗದಿಂದಲೇ ಜನವಸತಿ ಇತ್ತೆಂದು ಊಹಿಸಲಾಗಿದೆ. ಬೇಸಾಯ ಮತ್ತು ಮೀನುಗಾರಿಕೆ ಕಸುಬಾಗಿದ್ದ ಕೋಳಿಜನರು ಮೂಲತಃ ಕನ್ನಡಿಗರೆಂಬುದು ಕೆಲವು ಇತಿಹಾಸಕಾರರ ಅಭಿಪ್ರಾಯ. ಬರುಬರುತ್ತ ಮೀನ, ಅಗ್ರಿ, ನಾಗ, ಭೋಯಿ ಇತ್ಯಾದಿ ಜನರು. ಕೋಳಿಜನರೊಡನೆ ಬಂದು ಸೇರಿಕೊಂಡರೆಂದೂ ಅಂತೆಯೇ ಮುಂಬಯಿ ನಗರದಲ್ಲಿ ಕೋಳೀವಾಡಾದಂತೆ, ಮಂಜಗಾಂವ, ಅಗ್ರಿಪಾಡಾ, ನಾಗಪಾಡಾ, ಭೋಯಿವಾಡಾ ಇತ್ಯಾದಿ ಪ್ರದೇಶಗಳುಂಟಾದುವೆಂದೂ ಹೇಳಲಾಗಿದೆ. ಬೋರೀವಲಿ (ಬೋರೀವಳ್ಳಿ), ಕಾಂದೇವಲಿ (ಕಾಂದೀವಳ್ಳಿ), ವರ್ಸೋವಾ (ತೇರುಗಟ್ಟಿ), ಡೂಂಬೀವಲಿ (ಡೊಂಬೀವಳ್ಳಿ), ಕನ್ಹ್ನೇರಿ (ಕಣ್ಣೀರಿ), ಮುಂಬ್ರಾ (ಮುಂಬೇರಿ), ಕುರ್ಲಾ (ಕೊರ್ಲಾ) ಮುಂತಾದ ಹೆಸರುಗಳು ಕನ್ನಡ ಮೂಲವನ್ನೇ ಸೂಚಿಸುತ್ತವೆ.

	ಟಾಲಮೀ ಹೆಸರಿಸಿರುವ ಹೆಪ್ಟನೀಸಿಯವೇ ಮುಂದೆ ಮುಂಬಾಯಿ ಎಂದು ಪ್ರಸಿದ್ಧವಾದ ಏಳುದ್ವೀಪಗಳೆಂದು ನಾರ್ವೆಯ ವಿದ್ವಾಂಸ ಕ್ರಿಶ್ಚಿಯನ್ ಲಾಸೆನ್ ಅಭಿಪ್ರಾಯಪಟ್ಟಿರುವುದನ್ನು ಸಾಮಾನ್ಯವಾಗಿ ಎಲ್ಲರೂ ಒಪ್ಪುತ್ತಾರೆ. ಇವುಗಳ ಪೈಕಿ ಮಧ್ಯದ ದ್ವೀಪ ಮುಂಬಾಯಿ ಅದಕ್ಕೆ ಪಶ್ಚಿಮದ್ದು ವೋರ್ಲಿ: ಅನಂತರ ಪ್ರದಕ್ಷಿಣವಾಗಿ, ಪೆರೇಲ್, ಸೆವ್ರಿ-ಸೈಯನ್, ಮಜಗಾಂವ್, ಕೊಲಾಬಾ ಇತ್ಯಾದಿ. ಇವು ಒಂದೊಂದೂ ಉಳಿದವುಗಳೊಡನೆ ಕಡಲುಚಾಚುಗಳಿಂದ ಬೇರ್ಪಟ್ಟಿದ್ದುವು. 9ನೆಯ ಶತಮಾನದಿಂದ 1348ರ ತನಕ ಅದು ವಿವಿಧ ರಾಜ್ಯದ ಆಳ್ವಿಕೆಗೆ ಒಳಪಟ್ಟಿತ್ತು. ಅನಂತರ ಅದು ಗುಜರಾತಿನ ಸುಲ್ತಾನದ ವಶಕ್ಕೆ ಬಂತು. 1534ರಲ್ಲಿ ಗುಜರಾತಿನ ಸುಲ್ತಾನ ಬಹಾದೂರ್ ಷಾ ಅದನ್ನು ಪೋರ್ಚುಗೀಸರಿಗೆ ವಹಿಸಿ ಕೊಟ್ಟ. 1662ರಲ್ಲಿ ಇಂಗ್ಲಿಷ್ ದೊರೆ 2ನೆಯ ಚಲ್ರ್ಸ್ ಮತ್ತು ಪೋರ್ಚುಗಲ್ ದೊರೆಯ ತಂಗಿ ಕ್ಯಾತರೀನ್ ಬ್ರೆಗಾಂನ್ಜಾರ ಮದುವೆಯ ಸಂದರ್ಭದಲ್ಲಿ ಅವನಿಗೆ ನೀಡಲಾದ ವರದಕ್ಷಿಣೆಯಲ್ಲಿ ಮುಂಬಾಯಿಯೂ ಸೇರಿತ್ತು. 1662ರಲ್ಲಿ ಬ್ರಿಟಿಷ್ ಸೇನೆ ಅಲ್ಲಿಗೆ ಬರಲು ಯತ್ನಿಸಿದಾಗ ಅಲ್ಲಿಯ ಪೋರ್ಚುಗೀಸ್ ವೈಸ್‍ರಾಯ್ ಎಡೆ ಕೊಡಲಿಲ್ಲ. ಎರಡು ವರ್ಷಗಳಿಗೂ ಹೆಚ್ಚು ಕಾಲ ಹೋರಾಟ ನಡೆದ ಮೇಲೆ ಬ್ರಿಟಿಷರು ಅದನ್ನು ವಶಪಡಿಸಿಕೊಂಡರು. 1668ರ ಮಾರ್ಚ್ 27ರಂದು ಬ್ರಿಟಿಷ್ ದೊರೆ ಅದನ್ನು ವರ್ಷಕ್ಕೆ ಕೇವಲ 10 ಪೌಂಡ್ ಬಾಡಿಗೆಯ ಮೇಲೆ ಈಸ್ಟ್ ಇಂಡಿಯ ಕಂಪನಿಗೆ ಕೊಟ್ಟ. 1672ರಲ್ಲಿ ಸೂರತ್ತಿನ ಅಧ್ಯಕ್ಷ ಜಿರಾಲ್ಡ್ ಅಂಜಿಯೆರ್ ತನ್ನ ಸರ್ಕಾರದ ರಾಜಧಾನಿಯನ್ನು ಅಲ್ಲಿಗೆ ವರ್ಗಾಯಿಸಿದ. ಅವನೇ ಮುಂಬಾಯಿ ನಗರದ ಸ್ಥಾಪಕ ಎನ್ನಬಹುದು.

	ಆಗ ಮುಂಬಾಯಿ ಅತ್ಯಂತ ಅನಾರೋಗ್ಯಕರ ಪ್ರದೇಶವಾಗಿತ್ತು. ಮುಂಬಾಯಿಯಲ್ಲಿರುವವರಿಗೆ ಎರಡೇ ವರ್ಷ ಆಯಸ್ಸು ಎಂಬುದು ಗಾದೆ ಮಾತಾಗಿತ್ತು. ಅವನು ಈ ಪ್ರದೇಶವನ್ನು ಸ್ವಚ್ಛಗೊಳಿಸಿ ಅಲ್ಲೊಂದು ಆಸ್ಪತ್ರೆಯನ್ನೂ ಉಚ್ಚನ್ಯಾಯಾಲಯವನ್ನೂ ಸ್ಥಾಪಿಸಿದ. ಗುಜರಾತಿನ ಪಾರ್ಸಿ ವರ್ತಕರು ಅಲ್ಲಿಗೆ ಬಂದು ನೆಲಸಿದರು. ಮುಂಬಾಯಿಯ ಅಭಿವೃದ್ಧಿಯಲ್ಲಿ ಅವರ ಪಾತ್ರ ದೊಡ್ಡದು. ಡಚ್ ಆಕ್ರಮಣಕಾರರ ವಿರುದ್ಧ ಜೆರಾಲ್ಡ್ ಅಲ್ಲೊಂದು ಕೋಟೆ ಕಟ್ಟಿದ. ಅವನು ತೀರಿಕೊಂಡಾಗ (1677) ಮುಂಬಾಯಿ ನಗರದ ಜನಸಂಖ್ಯೆ 60,000 ಇತ್ತು. ಆ ವೇಳೆಗಾಗಲೆ ಪ್ರಾಮುಖ್ಯ ಗಳಿಸಿತ್ತು.

	ದೊರೆಯ ಸೇನೆಗೂ ಕಂಪನಿ ಸರ್ಕಾರಕ್ಕೂ ನಡುವೆ ಆಗಾಗ ಘರ್ಷಣೆಗಳಾಗುತ್ತಿದ್ದುವು. 1683ರಲ್ಲಿ ಎದ್ದ ದಂಗೆಯನ್ನು ಅಡಗಿಸಲಾಯಿತು.

	18ನೆಯ ಶತಮಾನದಲ್ಲಿ ನಗರ ಬಹಳ ಬೆಳೆವಣಿಗೆ ಸಾಧಿಸಿತು. ಅದರ ಸುತ್ತ ಕೋಟೆಯನ್ನು ಬಲಪಡಿಸಲಾಗಿತ್ತು. ದ್ವೀಪಗಳ ನಡುವಣ ಕಡಲ ಚಾಚುಗಳನ್ನು ಇಂಗಿಸಿ ನೆಲವನ್ನು ವಾಸಯೋಗ್ಯವಾಗಿ ಮಾಡುವ ಪ್ರಯತ್ನ ಸಾಗಿತ್ತು. ವೊರ್ಲಿ ಮತ್ತು ಮಾಹಿಮ್ ನಡುವೆ ಸಂಪರ್ಕ ಏರ್ಪಡಿಸಿದ್ದು ಒಂದು ದೊಡ್ಡ ಸಾಧನೆ. ಅದನ್ನು ಆಗ ಮಾಡಿಸಿದವನು. 1771-84 ಅವಧಿಯಲ್ಲಿ ಗವರ್ನರ್ ಆಗಿದ್ದ ವಿಲಿಯಮ್ ಹಾರ್ನ್‍ಬಿ. ಅವನು ನಿರ್ಮಿಸಿದ ಒಡ್ಡುದಾರಿಗೆ ಹಾರ್ನ್‍ಬಿ ವೆಲಾರ್ಡ್ ಎಂದೇ ಹೆಸರು.

	ಮೀನುಗಾರರ ಏಳುದ್ವೀಪಗಳಿಂದ ಇಂದಿನ ಆಧುನಿಕ ಮುಂಬಾಯಿ ನಗರವನ್ನು ಕಟ್ಟಿ ಬೆಳೆಸಿದವರು ಅನೇಕರು. ಅವರ ಪೈಕಿ ಪಾರ್ಸಿಜನರನ್ನು ಮರೆಯುವಂತಿಲ್ಲ. ಅವರಲ್ಲಿ ಮೊದಲಿಗನೆಂದರೆ ಲಾವ್‍ಜಿನಸರ್‍ವಾಂಜಿ ವಾಡಿಯ. ಅವನೊಬ್ಬ ಹಡಗು ನಿರ್ಮಾಪಕ ಅಥವಾ ವಾಡಿಯ. ಆ ಕಸಬಿನ ಹೆಸರೇ ಅವನ ಮನೆತನಕ್ಕೆ ಬಂತು. ಅವನು ಸೂರತ್ತಿನಿಂದ ಮುಂಬಯಿಗೆ 1773ರಲ್ಲಿ ಬಂದ ಹಡಗುಕಟ್ಟೆಗಳ ವಿಸ್ತರಣೆಯ ಮೇಲುಸ್ತುವಾರಿ ನೋಡಿಕೊಂಡ. ಅವನು ಆರಂಭಿಸಿ ಬ್ರಿಟಿಷ್ ಯುದ್ಧ ನೌಕಾಂಗಣದ ನೌಕಗಳೂ ಸೇರಿದಂತೆ ಅನೇಕ ಹಡಗುಗಳು ನಿರ್ಮಾಣವಾದುವು. ಆ ಉದ್ಯಮದಿಂದಾಗಿ ಅನೇಕ ಕುಶಲ ಕಾರ್ಮಿಕರು ತಯಾರಾದರು. ಹೀಗಾಗಿ ಮುಂಬಾಯಿ ಕೈಗಾರಿಕಾ ನಗರವಾಗಲು ಸಾಧ್ಯವಾಯಿತು. ವಿದೇಶ ಸ್ಪರ್ಧೆಯ ನಿರ್ಮೂಲನದೊಂದಿಗೆ ಅದರ ವ್ಯಾಪಾರೋದ್ಯಮಗಳು ಬೆಳೆದುವು. ಮುಂಬಯಿಯ ದಕ್ಷಿಣದಲ್ಲಿ ಮರಾಠಾ ಕಡಲುಕೊಳೆಗಾರರ ನೆಲೆಯನಿಸಿದ್ದ ಘರಿಯಾ ಅಥವಾ ವಿಜಯದುರ್ಗವನ್ನು ರಾಬರ್ಟ್‍ಕ್ಲೈವ್ ಮತ್ತು ಚಾಲ್ರ್ಸ್ ವಾಟ್ಸನ್ನರು 1756ರಲ್ಲಿ ಧ್ವಂಸ ಮಾಡಿದರು. ಪೋರ್ಚುಗೀಸ್ ಬಲವೂ ಕುಗ್ಗಿತು. ಫ್ರೆಂಚರ ವಸಾಹತುಗಳನ್ನು ಬ್ರಿಟಿಷರು ವಶಪಡಿಸಿಕೊಂಡದ್ದರಿಂದ ಅವರ ಸ್ಪರ್ಧೆ ಅಡಗಿತು. 1782ರ ಸಾಲ್ ಬಾಯ್ ಕೌಲಿನ ಪ್ರಕಾರ ಮರಾಠರು ಸಾಲ್ಸೆಟ್ ದ್ವೀಪ ಮತ್ತು ಬಸ್ಸೇನ್ ಬಂದರನ್ನು ಬ್ರಿಟಿಷರಿಗೆ ಒಪ್ಪಿಸಿದ್ದರಿಂದ ಮುಂಬಯಿ ಬೆಳವಣಿಗೆ ತ್ವರೆಯಿಂದ ಮುಂದುವರಿಯಿತು.

	ಮರಾಠಾ ಚಕ್ರಾಧಿಪತ್ಯದ ಪತನದೊಂದಿಗೆ ಬ್ರಿಟಿಷರ ಹೊಸ ಪ್ರಾಂತ್ಯವಾದ ಅಂದಿನ ಬೊಂಬಾಯಿ (ಮುಂಬಾಯಿ) ರಾಜಧಾನಿಯಾಯಿತು. ಇದರಿಂದ ಮುಂಬಾಯಿಯ ಪ್ರಗತಿ ಪ್ರಾಮುಖ್ಯಗಳು ಹೆಚ್ಚಿದುವು. ಮೌಂಟ್ ಸ್ಪೂವರ್ಟ್ ವಿಲ್ಪಿನ್ ಸ್ಪನ್ ಆ ಪ್ರಾಂತ್ಯದ ಪ್ರಥಮ ಲೆಫ್ಟನಂಟ್ ಗವರ್ನರ್ (189-27) ಆದ ಮುಂಬಾಯಿಯಿಂದ ಇಂಗ್ಲೆಂಡಿಗೆ ಸೂಯೆಜ್ ಕಾಲುವೆ ತೆರೆದಾಗ ಈ ಸಂಚಾರ ಸಾಧ್ಯವಾದುದ್ದು 1849ರಲ್ಲಿ. ಸೂಯೆಜ್ ಕಾಲುವೆ ತೆರೆದಾಗ ಈ ಸಂಚಾರದ ಕಾಲ 45 ದಿನಗಳಿಂದ 30 ದಿನಗಳಿಗೆ ಇಳಿಯಿತು. ಆ ವೇಳಗೆ ರೈಲುಮಾರ್ಗಗಳ ನಿರ್ಮಾಣವಾಗಿತ್ತು. ಒಳನಾಡಿನ ಹತ್ತಿ ಮುಂಬಯಿಗೆ ಬರತೊಡಗಿತ್ತು. ಅದು ಮುಂಬಾಯಿಯ ಹತ್ತಿಗಿರಣೆ ಕೈಗಾರಿಕೆಗೆ ತಳಹದಿ ಹಾಕಿತು. ಮುಂಬಾಯಿಯಿಂದ ಥಾಣೆಗೆ ರೈಲು ಸಂಚಾರ ಆರಂಭವಾದದ್ದು 1853ರಲ್ಲಿ 1864ರ ವೇಳೆಗೆ ರೈಲುಮಾರ್ಗಗಳು ವಿಸ್ತರಿಸಿದುವು. ವಿಕ್ಟೋರಿಯ ಟರ್ಮಿನಸ್ ನಿಲ್ದಾಣದ ನಿರ್ಮಾಣವಾದದ್ದು ಹಿಂದೆ ಕಡಲಿದ್ದು ನೆಲವಾದ ಪ್ರದೇಶದಲ್ಲಿ. ಬಾಟ್ರ್ಲ್ ಫ್ರಿಯರ್ ಗವರ್ನರ್ ಆಗಿದ್ದ ಕಾಲದಲ್ಲಿ (1862-67) ಕೋಟೆಯ ಗೋಡೆಗಳನ್ನು ಕೆಡವಲಾಯಿತು. 1861-63ರಲ್ಲಿ ಅಮೆರಿಕನ್ ಅಂತರ್ಯುದ್ಧದಿಂದಾಗಿ ಮುಂಬಾಯಿಯ ವ್ಯಾಪಾರ ವಿಶೇಷ ಅಭ್ಯುದಯ ಪಡೆಯಿತು. ಭಾರತದ ಹತ್ತಿಗೆ ಬ್ರಿಟನ್ನಿನ ಬೇಡಿಕೆ ಬೆಳೆದು ಬೆಲೆಗಳು ಏರಿದುವು. ವ್ಯಾಪಾರಿಗಳು ಲಾಭದ ಕೊಳ್ಳೆ ಹೊಡೆದರು. ಯುದ್ಧ ಅಂತ್ಯಗೊಂಡಾಗ ಹಠಾತ್ತನೆ ವ್ಯಾಪಾರ ಕುಸಿದು ನಗರದ ತಳಪಾಯವೇ ಅದಿರುವಂತಾಯಿತು. ಕ್ರಮೇಣ ಮತ್ತೆ ವ್ಯಾಪಾರ ಕುದುರಿ ಮುಂಬಯಿ ಚೇತರಿಸಿಕೊಂಡಿತು.

	1884ನೆಯ ಇಸವಿ ಮುಂಬಯಿಯ ಬೆಳವಣಿಗೆಯಲ್ಲಿ ಒಂದು ಮೈಲುಗಲ್ಲು. ಕವಾಸ್‍ಜಿ ನಾನಾಭಾಯ್ ದಾವಾರ್ ಎಂಬಾತ ಆ ವರ್ಷ ಮುಂಬಯಿಯ ಪ್ರಥಮ ಹತ್ತಿ ಗಿರಣಿ ಸ್ಥಾಪಿಸಿದ. ಮುಂದಿನ ಐದು ವರ್ಷಗಳಲ್ಲಿ ಇನ್ನೂ ಐವತ್ತು ಗಿರಣಿಗಳು ಸ್ಥಾಪಿತವಾದುವು. ಇನ್ನೊಬ್ಬ ಉದ್ಯಮಶೀಲ ಪಾರ್ಸಿ-ಜಮ್‍ಷೆಟ್‍ಜಿ ನಸರ್‍ವಾಂಜಿ (1839-1904). ಆತ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯನ್ನು ಆರಂಭಿಸಿದ. ಪಶ್ಚಿಮ ಘಟ್ಟಗಳಲ್ಲಿ ಹರಿದು ಹೋಗುತ್ತಿದ್ದ ನದಿಯ ನೀರನ್ನು ಬಳಸಿಕೊಂಡು ಜಲವಿದ್ಯುತ್ ಉತ್ಪಾದಿಸುವ ಕನಸು ಕಂಡವನ್ನು ಆತ. ಅವನ ಮಗ ಸರ್ ದೊರಾಟ್‍ಜಿ ಟಾಟಾ 1915ರಲ್ಲಿ ಅದನ್ನು ಕಾರ್ಯಗತಗೊಳಿಸಿದ. ಮುಂಬಾಯಿಗೆ ಅಗ್ಗದ ವೆಚ್ಚದಲ್ಲಿ ಯಥೇಚ್ಛ ವಿದ್ಯುಚ್ಛಕ್ತಿ ದೊರಕುವಂತಾಯಿತು. ಹಲವಾರು ಕೈಗಾರಿಕೆಗಳ ಸ್ಥಾಪನೆಯಾಯಿತು. ಕಾಗದ. ಹಿಟ್ಟು ಅಕ್ಕಿ, ಎಣ್ಣೆ, ಮರ, ಹಗ್ಗ, ಚರ್ಮ, ಕಲ್ಲು, ಸಿಮೆಂಟ್, ಲೋಹಗೆಲಸ, ಸಕ್ಕರೆ, ಹೊಗೆಸೊಪ್ಪು, ಚಹಾ, ಹೆಂಚು. ಇಟ್ಟಿಗೆ ಮುಂತಾದ ಹಲವಾರು ಗಿರಣಿಗಳೂ ಕಾರ್ಖಾನೆಗಳೂ ಆರಂಭವಾದುವು. ಮುದ್ರಣಾಲಯಗಳೂ ಕಾರ್ಯಗಾರಗಳೂ ಸ್ಥಾಪಿತವಾದವು. ವಿದ್ಯುತ್ ಟ್ರಾಮ್, ವಿದ್ಯುತ್ ರೈಲು ಬಂದವು.

	ಇವೆಲ್ಲ ಚಟುವಟಿಕೆಗಳೊಂದಿಗೆ 19ನೆಯ ಶತಮಾನದ ಕೊನೆಯ ವೇಳೆಗೆ ಮುಂಬಯಿ ನಗರದ ಸ್ವರೂಪವೇ ಬಹಳ ಮಟ್ಟಿಗೆ ಬದಲಾಗಿತ್ತು. ಈಗ ಮಹಾತ್ಮಗಾಂಧಿ ರಸ್ತೆ ಎನಿಸಿರುವ ಎಸ್‍ಪ್ಲನೇಡ್‍ನ ಉದ್ದಕ್ಕೂ ಕಟ್ಟಡಗಳು ಸಾಲುಗಟ್ಟಿದುವು. ಅವುಗಳಲ್ಲಿ ಮುಖ್ಯವಾದ ಕೆಲವು ಕಟ್ಟಡಗಳು ಸರ್ಕಾರಿ ಸಚಿವಾಲಯ, ಉಚ್ಛ ನ್ಯಾಯಾಲಯ ವಿಶ್ವವಿದ್ಯಾಲಯದ ಕಟ್ಟಡಗಳು, ಗಡಿಯಾರ ಗೋಪುರ. ಮರಾಮತ ಇಲಾಖೆ ಕಛೇರಿ, ಅಂಚೆ ಕಛೇರಿ ಇವೆಲ್ಲ ಯೂರೊಪಿನ ಗಾಥಿಕ್ ಶೈಲಿಯಲ್ಲಿ ನಿರ್ಮಾಣವಾದ ಕಟ್ಟಡಗಳು. ಕ್ರಾಫರ್ಡ್ ಮಾರುಕಟ್ಟೆ 1873ರಲ್ಲಿ ನಿರ್ಮಾಣವಾಯಿತು. ನಗರಕ್ಕೆ ಸುರಕ್ಷಿತ ನೀರು ಪೂರೈಕೆಯ ಹಾಗೂ ಒಳಚರಂಡಿಯ ವ್ಯವಸ್ಥೆಗಳು ಬಂದುವು (1879).

	ನಗರ ಜನಸಂಖ್ಯೆ 1891ರ ವೇಳೆಗೆ 8,21,000 ಆಗಿತ್ತು. ನಗರದ ಜನ ಸಂದಣಿಯೊಂದಿಗೆ ಕೊಳೆಗೇರಿಗಳೂ ಬೆಳೆಯತೊಡಗಿದುವು. ನಗರದ ಬೆಳವಣಿಗೆ ವ್ಯವಸ್ಥಿತವಾಗಿ ಮುಂದುವರಿಯುವಂತೆ ಮಾಡಲು ನಗರಾಭಿವೃದ್ಧಿ ಮಂಡಲಿಯ ಸ್ಥಾಪನೆಯಾಯಿತು. ಬ್ಯಾಕ್ ಬೇ (ಹಿನ್ನೀರು) ಪ್ರದೇಶದ ಅಭಿವೃದ್ಧಿ ಯೋಜನೆ ಕಾರ್ಯಗತವಾಯಿತು (1918), 526.11 ಹೆಕ್ಟೇರು ಪ್ರದೇಶವನ್ನು ಒಳಗೊಳ್ಳುವಂತೆ ಕೊಲಾಬಾ ಬಳಿಯಿಂದ ಮೇರೀನ್ ಲೈನ್ಸ್‍ವರೆಗೆ ಕಡಲಿಗೆ ತಡೆ ಗೋಡೆ ಕಟ್ಟುವ ಮಹಾಕಾರ್ಯವಿದು. ಆದರೆ ಇದರಲ್ಲಿ ಹಲವಾರು ದೋಷಗಳಾದ್ದರಿಂದ ಈ ಬಗ್ಗೆ 1926ರಲ್ಲಿ ವಿಚಾರಣೆ ನಡೆಯಿತು. ಕೊನೆಗೆ ಹಂತ ಹಂತವಾಗಿ ಇದನ್ನು ತೆಗೆದುಕೊಳ್ಳಲು ತೀರ್ಮಾನಿಸಲಾಯಿತು. ಎರಡನೆಯ ಮಹಾ ಯುದ್ಧದ ಅನಂತರ ಈ ಕೆಲಸ ಮುಂದುವರಿಯಿತು. ಚೌಪಾಟಿ ಸೀಫೇಸ್ ರಸ್ತಯಿಂದ ಹಾರ್ವೆ ರಸ್ತೆ ಕೂಡುವವರೆಗೆ ನಿರ್ಮಿಸಲಾದ ಮೆರೀನ್ ಡ್ರೈವ್ ಭಾರತದ ಪ್ರಥಮ ಜೋಡಿ ಹೆದ್ದಾರಿ. ಉಪನಗರಗಳ ನಿರ್ಮಾಣವೂ ಭರದಿಂದ ಸಾಗಿತು.

	1901ರಲ್ಲಿ ನಗರದ ಜನಸಂಖ್ಯೆ (ಉಪನಗರವೂ ಸೇರಿ) 8,47,497. 1941ರ ವೇಳೆಗೆ ಇದು 16,95,168 ಆಗಿತ್ತು. 1951ರಲ್ಲಿ ಜನಸಂಖ್ಯೆ 23,29,020. ಮುಂಬಯಿ ಭಾರತದ ಎರಡನೆಯ ನಗರವಾಗಿ ಬೆಳೆದಿತ್ತು. ಮೊದಲನೆಯದ್ದು ಕಲ್ಕತ್ತ. ಮುಂಬಯಿ ಒಂದು ರೀತಿಯಲ್ಲಿ ಅಂತಾರಾಷ್ಟ್ರೀಯ ನಗರ. ಇಲ್ಲಿ ಹಲವಾರು ದೇಶಗಳ ಜನರೂ ಹಲವಾರು ಧರ್ಮ, ಭಾಷೆಗಳವರೂ ಇದ್ದಾರೆ. ಮರಾಠಿಯಲ್ಲದೆ ಗುಜರಾತಿ, ಉರ್ದು, ಹಿಂದಿ, ಕೊಂಕಣಿ, ತೆಲುಗು, ಸಿಂಧಿ, ತಮಿಳು, ಕನ್ನಡ ಆಡುವವರೂ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 1981ರ ಜನ ಗಣತಿಯ ಪ್ರಕಾರ ನಗರದ ಜನ ಸಂಖ್ಯೆ 82,43,405. ಜನದಟ್ಟಣೆಯನ್ನು ಕಡಿಮೆ ಮಾಡಲು 1970ರಲ್ಲಿ ಸರ್ಕಾರ ಹೊಸ ಮುಂಬಯಿ ಯೋಜನೆಯನ್ನಾರಂಭಿಸಿ ವಿಶಾಲ ಪ್ರದೇಶವನ್ನು ವಶಪಡಿಸಿಕೊಂಡು ವಸತಿಗಳನ್ನು ನಿರ್ಮಿಸುವ ಕೆಲಸ ಕೈಗೊಂಡಿತು. ಆ ದಶಕದ ಆದಿಯಲ್ಲಿ ಥಾಣಿ ಆಖಾತದ ಮೇಲೆ ಬೃಹತ್ ಸೇತುವೆಯೊಂದನ್ನು ನಿರ್ಮಿಸಲಾಯಿತು.

	ವೈಶಿಷ್ಟ್ಯಗಳು: ಪ್ರಾದೇಶಿಕವಾಗಿ ನಗರ ವಿಸ್ತರಿಸಿದ್ದರೂ ಅದರ ಕೆಲವು ಹಳೆಯ ವೈಶಿಷ್ಟ್ಯಗಳು ಉಳಿದುಕೊಂಡಿವೆ `ಕೋಟೆ ಪ್ರದೇಶ ಮುಂಬಯಿಯ ಕೇಂದ್ರ ಪ್ರದೇಶ. ಅದು ಆಡಳಿತ ಹಾಗೂ ವಾಣಿಜ್ಯ ವಲಯ. ಬಂದರು ಕಟ್ಟೆಗಳು, ಮಧ್ಯೆ ಹಾಗೂ ಪಶ್ಚಿಮ ರೈಲ್ವೆ ನಿಲ್ದಾಣಗಳು, ಬ್ಯಾಂಕುಗಳು, ವ್ಯವಹಾರ ಸಂಸ್ಥೆಗಳು, ಸರ್ಕಾರಿ ಕಛೇರಿಗಳು ಹೋಟೆಲುಗಳು, ಶಿಕ್ಷಣ ಸಂಸ್ಥೆಗಳು, ದೂರವಾಣಿ ಮತ್ತು ತಂತಿ ಕಛೇರಿಗಳು ಇಲ್ಲಿ ಕಿಕ್ಕಿರಿದಿವೆ. ಹಲವಾರು ಗಗನಚುಂಬಿ ಕಟ್ಟಡಗಳು ಎದ್ದಿವೆ. ದಕ್ಷಿಣಕ್ಕೆ ಕೊಲಾಬಾವರೆಗೂ ವಾಣಿಜ್ಯ ಮತ್ತು ವಸತಿಗಳು ಹಬ್ಬಿವೆ. ದಕ್ಷಿಣದಲ್ಲಿ ರಕ್ಷಣಾ ಬಲಗಳ ವಲಯವಿದೆ.

	ಕೋಟೆ ಪ್ರದೇಶದ ಉತ್ತರಕ್ಕೆ ವಾಣಿಜ್ಯ ಮತ್ತು ವಸತಿಗಳಿವೆ. ಕಾಲ್ಟದೇವಿ. ಗಿರ್‍ಗಾಂವ್, ಮಹಮ್ಮದಾಲಿ ರಸ್ತೆ ಪ್ರಮುಖವಾಗಿವೆ. ಇದು ಮಧ್ಯಮ ವರ್ಗದ ಜನರಿರುವ ವಲಯ. ನಡುನಡುವೆ ಸಗಟು ಹಾಗೂ ಚಿಲ್ಲರೆ ವ್ಯಾಪಾರ ಮಾರುಕಟ್ಟೆಗಳಿವೆ. ಇವರ ಪಶ್ಚಿಮಕ್ಕೆ ಎದುರಾಗಿ ಮೇಲಣ ವರ್ಗಗಳ ವಸತಿಗೃಹಗಳಿವೆ. ಇದರ ಪಶ್ಚಿಮಕ್ಕೆ ಎದುರಾಗಿ ಮೇಲಣ ವರ್ಗಗಳ ವಸತಿಗೃಹಗಳಿವೆ. ಪೂರ್ವಕ್ಕೆ ಬಂದರುಕಟ್ಟೆಗಳ ಸಾಲು ಮುಂದುವರಿದಿದೆ. ರೈಲ್ವೆ ಅಂತಿಮ ನಿಲ್ದಾಣಗಳೂ ಇವೆ.

	ಇನ್ನೂ ಉತ್ತರಕ್ಕೆ ಪರೇಲ್ ಜವಳಿ ಕೈಗಾರಿಕೆ ಪ್ರದೇಶ. ಇಲ್ಲಿ ಹಲವಾರು ಗಿರಣಿಗಳೂ ಕಾರ್ಮಿಕ ವಸತಿಗಳೂ ಇವೆ. ನೈರುತ್ಯಕ್ಕೆ ಮಲಬಾರ್ ಮತ್ತು ಕೊಲಾಬಾ ಗುಡ್ಡಗಳ ಮೇಲೆ ಶ್ರೀಮಂತರ ವಸತಿಗಳಿವೆ. ಪಶ್ಚಿಮದ ಕಡಲ ಗಾಳಿಯ ತಂಪು ಆಹ್ಲಾದಕರ. ಹಾರ್ನ್‍ಬಿ ವೆಲ್ಲಾರ್ಡ್‍ನ ರಕ್ಷಣಾ ಗೋಡೆಯಿಂದ ಈ ಪ್ರದೇಶದ ತಗ್ಗಿನ ಜೌಗುನೆಲವನ್ನು ಬಳಕೆಗೆ ಯೋಗ್ಯವಾಗಿ ಮಾಡಲಾಗಿದೆ. ಇದರ ಒಂದು ಭಾಗವೇ ಮಹಾಲಕ್ಷ್ಮೀ ರೇಸ್‍ಕೋರ್ಸ್ ಮತ್ತು ವಿಶಾಲ ಮೈದಾನ. ಇಲ್ಲೂ ವಾಸದ ಮನೆಗಳು ಮುನ್ನುಗ್ಗುತ್ತಿವೆ.

	ಎರಡನೆಯ ಮಹಾಯುದ್ಧಕ್ಕೆ ಮೊದಲು ಉಪನಗರದ ಅಭಿವೃದ್ಧಿ ಪರೇಲ್ ಮತ್ತು ಮಾಹಿಮ್ ಕಡಲು ಚಾಚಿನ ಪ್ರದೇಶಕ್ಕೆ ಸೀಮಿತವಾಗಿತ್ತು. ದಾದರ್ ಮತ್ತು ಶಿವಾಜಿ ಪಾರ್ಕ್ ಪ್ರದೇಶದ ಅಭಿವೃದ್ಧಿಯಾಯಿತು. ಯುದ್ಧದ ಅನಂತರ ಪಶ್ಚಿಮ ಮತ್ತು ಮಧ್ಯ ರೈಲ್ವೆ ಮಾರ್ಗಗಳ ಉದ್ದಕ್ಕೂ ಸಣ್ಣ ಸಣ್ಣ ಆಕರ್ಷಕ ಉಪನಗರಗಳು ಬೆಳೆದುವು. ಮುಖ್ಯವಾಗಿ ಪೂರ್ವಭಾಗದಲ್ಲಿ ಹಳೆಯ ಮುಂಬಯಿ ಆಗ್ರ ರಸ್ತೆಯ ಬದಿಗೆ ಹೊಸ ಕೈಗಾರಿಕೆಗಳು ಎದ್ದಿವೆ. ಥಾಣವನ್ನೂ ದಾಟಿ ಹಬ್ಬಿವೆ. ಸಾಮಾನ್ಯವಾಗಿ ವಸತಿಗೃಹಗಳಿಂದ ಕೂಡಿದ ಪಶ್ಚಿಮ ಕರಾವಳಿ ಪ್ರದೇಶದಲ್ಲೂ ಹೊಸ ಕೈಗಾರಿಕೆಗಳು ಆಕ್ರಮಣ ನಡೆಸಿವೆ. ಮಧ್ಯವಲಯದಲ್ಲಿ ಮಾತ್ರ ಮುಖ್ಯವಾಗಿ ಸಾಂತಾಕ್ರೂಚ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಾಗಿ ತೆರೆದ ವಿಶಾಲ ಪ್ರದೇಶ ಉಳಿದಿದೆ. ರೈಲ್ವೆಯ ವಿದ್ಯುದೀಕರಣ ಹಾಗೂ ಎಕ್ಸ್‍ಪ್ರೆಸ್ ಮಾರ್ಗಗಳ ನಿರ್ಮಾಣದಿಂದಾಗಿ ಹೊಸ ನಗರ ಪ್ರದೇಶಗಳ ನಿರ್ಮಾಣ ಸುಲಭವಾಗಿದೆ.

	ಸಮಸ್ಯೆಗಳು: ಯುದ್ಧಾನಂತರದಲ್ಲಿ ಮುಂಬಯಿ ನಗರ ಸ್ಫೋಟಿಸುವ ರೀತಿಯಲ್ಲಿ ಬೆಳೆಯುತ್ತಿರುವುದನ್ನು ಅದರ ಭೂದೃಶ್ಯದ ಬದಲಾವಣೆಯಲ್ಲಿ ಕಾಣಬಹುದು. ಮಲಬಾರ್ ಹಿಲ್ ಮೇಲೆ ಗಗನಚುಂಬಿ ಕಟ್ಟಡಗಳು ಬೆಳೆಯುತ್ತಿವೆ. ಇತರ ಎಡೆಗಳಲ್ಲೂ ಎತ್ತರದ ಕಟ್ಟಡಗಳು ಮೇಲೆದ್ದು ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಿವೆ. ಅಂಧೇರಿ, ಕುರ್ಲ ಮುಂತಾದೆಡೆಗಳಲ್ಲಿ ಬೆಟ್ಟಗಳ ಪ್ರದೇಶವನ್ನು ಆಕ್ರಮಿಸಿಕೊಳ್ಳಲಾಗುತ್ತಿದೆ. ವಡಾಲ, ಬಂದ್ರ ಮುಂತಾದ ಎಡೆಗಳಲ್ಲಿ ಕಡಲು ಭಾರತ ಪ್ರದೇಶವನ್ನು ಬಳಕೆಗೆ ಯೋಗ್ಯವಾಗಿ ಮಾಡಲಾಗಿದೆ. ಎಕ್ಸ್‍ಪ್ರೆಸ್ ಹಾದಿಗಳ ಆಧುನಿಕ ಕೈಗಾರಿಕಾ ಕಟ್ಟಡಗಳ ನಿರ್ಮಾಣವಾಗಿದೆ. ಸದಾ ಕಿಕ್ಕಿರಿದು ತುಂಬಿದ ಉಪನಗರ ರೈಲುಗಳೂ ನಿರಂತರವಾಗಿ ಬೆಳೆಯುತ್ತಿರುವ ಕೊಳೆಗೇರಿಗಳೂ ಅನಿಯಂತ್ರಿತ ನಗರ ಬೆಳೆವಣಿಗೆಯ ದೃಶ್ಯಗಳು.

	ಈ ನಗರ ಎದುರಿಸುತ್ತಿರುವ ಸಮಸ್ಯೆಗಳು ಹಲವಾರು. ದೇಶದ ಇತರ ಕಡೆಗಳಿಂದ ಜನರ ಒಳವಲಸೆ ನಿರಂತರವಾಗಿ ಸಾಗಿದೆ. ಕೆಲವು ಪ್ರದೇಶಗಳಲ್ಲಿ ಎಕರೆಗೆ 1520ಕ್ಕೂ ಹೆಚ್ಚು ಜನಸಾಂದ್ರತೆಯಿದೆ. ನಾಗರಿಕ ಸೌಲಭ್ಯಗಳು ಎಲ್ಲರಿಗೂ ದೊರೆಕುತ್ತಿಲ್ಲ. ಒಳನಾಡಿನ ಆರ್ಥಿಕ ದುಸ್ಥಿತಿಯೇ ಈ ಜನದಟ್ಟಣೆಗೆ ಕಾರಣವೆಂಬುದು ಪರಿಣಿತರ ಮತ. ಉಪನಗರಗಳಲ್ಲಿ ಕೈಗಾರಿಕೆಗಳು ಬೆಳೆಯುತ್ತಿರುವುದೂ ಹಳೆಯ ದ್ವೀಪ ಪ್ರದೇಶಗಳಲ್ಲಿರುವ ಕೈಗಾರಿಕೆಗಳನ್ನು ಹೊರಕ್ಕೆ ವರ್ಗವಾಗಲು ಒಪ್ಪದಿರುವುದೂ ಕಾರಣಗಳು. ಮುಂಬಯಿ ಹಿಂದೆ ಜವಳಿ ಕೈಗಾರಿಕೆಯ ಕೇಂದ್ರವಾಗಿತ್ತು. ಈಗ ಅನೇಕ ಹೊಸ ಕೈಗಾರಿಕೆಗಳು, ಅಲ್ಲಿವೆ. ಮಧ್ಯಮ ಗಾತ್ರದ ಮತ್ತು ಸಣ್ಣ ಎಂಜಿನಿಯರಿಂಗ್ ಘಟಕಗಳು, ಔಷಧ ತಯಾರಿಕೆ ಉದ್ಯಮಗಳು, ಪೆಟ್ರೋಲಿಯಮ್ ರಸಾಯನ ಮತ್ತು ಇತರ ಹಲವು ಉದ್ಯಮಗಳು ಅಲ್ಲಿ ಸ್ಥಾಪಿತವಾಗಿವೆ. ಇವುಗಳಿಂದ ಉದ್ಯೋಗಾವಕಾಶಗಳು ಹೆಚ್ಚುತ್ತಿವೆಯಾದರೂ ವಸತಿ ಸಮಸ್ಯೆ ತೀವ್ರವಾಗಿದೆ. ಎಲ್ಲೆಲ್ಲೂ ಕೊಳೆಗೇರಿಗಳು ಬೆಳೆಯುವುದಕ್ಕೆ ಇದು ಕಾರಣ. ಅನೇಕ ಕಾರ್ಮಿಕರು ಒಂದೆಡೆ ನೆಲೆನಿಲ್ಲದಿರುವುದು. ಹಂಗಾಮಿಯಾಗಿ ಕೆಲಸ ಮಾಡುತ್ತಿರುವುದೂ ಕಾರಣವಾಗಿವೆ. ಗ್ರಾಮಪ್ರದೇಶದ ಸ್ಥಿತಿ ಸುಧಾರಣೆಯಾಗದ ನಗರದ ಸಮಸ್ಯೆಗಳು ಪರಿಹಾರ ಸಂಭವವಿಲ್ಲ. ಸಹಕಾರಿ ಗೃಹನಿರ್ಮಾಣ ವ್ಯವಸ್ಥೆ ಗೃಹನಿರ್ಮಾಣ ಮಂಡಳಿ ಮುಂತಾದವು ವಸತಿ ಸಮಸ್ಯೆಯ ಪರಿಹಾರಕ್ಕೆ ಯತ್ನ ನಡಸಿವೆ. ಮುಂಬಯಿ ಮಹಾನಗರಯೋಜನಾ ಮಂಡಲಿ. ಹೊಸ ನಗರಕೇಂದ್ರಗಳ ನಿರ್ಮಾಣ ಮುಂತಾದವುಗಳೂ ಈ ನಿಟ್ಟಿನಲ್ಲಿ ಪ್ರಯತ್ನಗಳಾಗಿವೆ.
(ಬಿ.ಎ.ಎಸ್.)

	ಸಾಂಸ್ಕøತಿಕ ಮತ್ತು ಇತರ ಚಟುವಟಿಕೆಗಳು: ಮುಂಬಯಿ ನಗರ ಒಂದು ಮುಖ್ಯ ಬೌದ್ಧಿಕ ಕೇಂದ್ರ 1804ರಲ್ಲಿ ಅಲ್ಲಿ ಬಾಂಬೇ ಲಿಟರರಿ ಸೊಸೈಟಿಯ ಸ್ಥಾಪನೆಯಾಯಿತು. 1827ರಲ್ಲಿ ಅದು ರಾಯಲ್ ಏಷ್ಯಾಟಿಕ್ ಸೊಸೈಟಿಯ ಶಾಖೆಯಾಗಿ ಪರಿವರ್ತನೆಗೊಂಡಿತು. ಅದರ ತ್ರೈಮಾಸಿಕ ಪತ್ರಿಕೆ ಅಂತಾರಾಷ್ಟ್ರೀಯ ಖ್ಯಾತಿಗಳಿಸಿವೆ. ಅದರ ಅಮೂಲ್ಯ ಗ್ರಂಥಾಲಯ 1841ರಲ್ಲಿ ಆರಂಭವಾಯಿತು. ಬೊಂಬಾಯಿ ವಿಶ್ವವಿದ್ಯಾಲಯ 1857ರಲ್ಲಿ ಸ್ಥಾಪಿತವಾಯಿತು. ಬ್ಯಾಕ್ಟೀರಿಯಾ ನಿರೋಧ ಲಸಿಕ ತಯಾರಿಸುವ ಹಾಫ್‍ಕಿನ್ ಸಂಸ್ಥೆ ಅಲ್ಲಿ 1890ರಲ್ಲಿ ಆರಂಭವಾಯಿತು. ಪ್ರಿನ್ಸ್ ಆಫ್ ವೇಲ್ಸ್ ವಸ್ತುಸಂಗ್ರಹಾಲಯ ಸ್ಥಾಪಿತವಾದ್ದು 1904ರಲ್ಲಿ ಅದರಲ್ಲಿ ಕಲೆ. ಪುರಾತತ್ವ. ಸಸ್ಯವಿಜ್ಞಾನ ಎಂಬ ಮೂರು ವಿಭಾಗಗಳಿವೆ. ಈಚೆಗೆ ಕೈಗಾರಿಕಾ ವಿಭಾಗವೊಂದು ಆರಂಭವಾಯಿತು. ಅಲ್ಲೇ ಜಹಾಂಗೀರ್ ಕಲಾ ಗ್ಯಾಲರಿಯಿದೆ. ಸಂಸ್ಕøತ ಪ್ರಾಚೀನ ಹಾಗೂ ಆಧುನಿಕ ಭಾರತೀಯ ಭಾಷೆಗಳು. ಇತಿಹಾಸ, ಧರ್ಮಗಳಲ್ಲಿ ಸಂಶೋಧನೆ ಮತ್ತು ಪ್ರಸಾರಕ್ಕಾಗಿ ಭಾರತೀಯ ವಿದ್ಯಾಭವನ 1938ರಲ್ಲಿ ಸ್ಥಾಪಿತವಾಯಿತು. ರೊರಾಬ್ಜಿ ಟಾಟಾ ಅವರು ಸ್ಥಾಪಿಸಿದ (1945) ಟಾಟಾ ಮೂಲಭೂತ ಸಂಶೋಧನ ಸಂಸ್ಥೆ ಮುಂಬಯಿಯಲ್ಲಿದೆ. ಟಾಟಾ ಸಮಾಜ ವಿಜ್ಞಾನಿಗಳ ಸಂಸ್ಥೆಯೂ (1936) ಪ್ರಖ್ಯಾತವಾದ್ದು.

	ಮುಂಬಯಿ ಒಂದು ಪ್ರಮುಖ ರೇವು ಪಟ್ಟಣ. ಅದು ಹಲವು ಕೈಗಾರಿಕೆಗಳ. ವಾಣಿಜ್ಯ ಚಟುವಟಿಕೆಗಳ. ಹಣಕಾಸು ವಹಿವಾಟುಗಳ ಕೇಂದ್ರ. ಟ್ರಾಂಬೆಯಲ್ಲಿ ತೈಲ ಸಂಸ್ಕರಣ ಕೇಂದ್ರ ಮತ್ತು ಪರಮಾಣು ವಿದ್ಯುತ್ ಸ್ಥಾವರಗಳೂ ಇವೆ.

	ಮುಂಬಯಿ ನೈಸರ್ಗಿಕ ಆಳ ಕಡಲ ರೇವು. ಸುಮಾರು 110 ಚಕಿಮೀ ವಿಸ್ತಾರವಾಗಿದೆ. ಅಲೆಗ್ಸಾಂಡ್ರ, ಪ್ರಿನ್ಸ್, ವಿಕ್ಟೋರಿಯ ಮುಂತಾದ ಹಲವು ಬಂದರುಕಟ್ಟೆಗಳಿವೆ. ಬಂದರು ಅಭಿವೃದ್ಧಿ ಮತ್ತು ವಿಸ್ತರಣೆಯ ಕಾರ್ಯ ಸತತವಾಗಿ ಸಾಗಿದೆ. ಬಾಲಾರ್ಡ್ ಹಡಗು ಇಳಿದಾಣದ ಉದ್ದ 457.20 ಮೀಟರ್. ಅಲ್ಲಿ 228.60 ಮೀಟರ್‍ವರೆಗಿನ ಉದ್ದದ ಹಡಗುಗಳು ನಿಲ್ಲಬಹುದು. ಪಕ್ಕದ ರೈಲು ನಿಲ್ದಾಣದಿಂದ ಮಧ್ಯ ಮತ್ತು ಪಶ್ಚಿಮ ರೈಲ್ವೆಗಾಡಿಗಳು ದೇಶದ ಎಲ್ಲೆಡೆಗಳಿಗೂ ಹೋಗಿಬರುತ್ತವೆ. ಮುಂಬಯಿ ನಗರದಲ್ಲಿ ಪಶ್ಚಿಮ ಮತ್ತು ಮಧ್ಯ ಹಾಗೂ ಅತ್ಯಾಧುನಿಕ. ಅದರೆ ಮುಂಬಯಿ ಸಾಂತಾಕ್ರೂಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಲ್ಕತ್ತಾದ ಮೂಲಕ ಪೂರ್ವದ ನಗರಗಳಿಗೂ ಸಂಪರ್ಕ ಕಲ್ಪಿಸಿದೆ. ದೇಶದೊಳಗಿನ ಎಲ್ಲ ಪ್ರಮುಖ ನಗರಗಳೊಂದಿಗೆ ವಿಮಾನ ಸಂಪರ್ಕವಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ